ಎಕ್‍ಹಾರ್ಟ್, ಮೀಸ್ಟರ್
	1260-1329. ಪ್ರಸಿದ್ಧ ಜರ್ಮನ್ ಅನುಭಾವಿ. ಡಾಮಿನಿಕನ್ ಎಂಬ ಧಾರ್ಮಿಕ ಪಂಥಕ್ಕೆ ಸೇರಿದವ. ಪ್ಯಾರಿಸ್‍ನಲ್ಲಿ ತತ್ತ್ವಶಾಸ್ತ್ರದ ಅಧ್ಯಾಪಕನಾಗಿಯೂ ಪಂಥದ ಪ್ರಮುಖ ಪ್ರತಿನಿಧಿಯಾಗಿಯೂ ಕೆಲಸ ಮಾಡಿದ. ಸ್ವಲ್ಪಕಾಲ ಸ್ಪ್ರಾಸ್‍ಬರ್ಗ್‍ನಲ್ಲೂ ಕೆಲವು ದಿನ ಕೊಲೋನಿನಲ್ಲೂ ಉಪದೇಶಕನಾಗಿದ್ದ. ಇಷ್ಟಾದರೂ ಈತನ ಕೆಲಸ ಕಾರ್ಯಗಳನ್ನು ಉಗ್ರವಾಗಿ ಟೀಕಿಸಿದವರಿಲ್ಲದಿರಲಿಲ್ಲ. ಕೊಲೋನಿನಲ್ಲಿ ಮಠಾಧಿಪತಿಯಾಗಿದ್ದ ಹೆನ್ರಿ ಎಕ್‍ಹಾರ್ಟ್‍ನನ್ನು ಪಾಷಂಡಿ ಎಂದು ದೂರಿದ. ಎಕ್‍ಹಾರ್ಟ್ ಪೋಪ್‍ಗೆ ಈ ಸುದ್ದಿಯನ್ನು ಮುಟ್ಟಿಸಿ ಈ ಅಪವಾದದಿಂದ ತನ್ನನ್ನು ಪಾರು ಮಾಡಬೇಕೆಂದು ಪ್ರಾರ್ಥಿಸಿದ. ಆದರೆ ಪೋಪ್ ಇವನ ಅಹವಾಲಿಗೆ ಕಿವಿಗೊಡಲಿಲ್ಲ ಮಾತ್ರವಲ್ಲ. 1329ರಲ್ಲಿ ಇವನ ಮೇಲೆ ಅಭಿಶಾಪ ಒಂದನ್ನು ಜಾರಿ ಮಾಡಿದ. ಆದರೆ ಇದನ್ನು ಜಾರಿಗೆ ತರುವುದರೊಳಗಾಗಿ ಎಕ್‍ಹಾರ್ಟ್ ತೀರಿಕೊಂಡ. ಎಕ್‍ಹಾರ್ಟನ ಅನುಭಾವ ಆದರ್ಶವಾದದಲ್ಲಿ ಸಂಪ್ರದಾಯಕ್ಕೆ ವಿರೋಧವಾದ ಕೆಲವು ಅಂಶಗಳಿದ್ದುವು. ಆದರೆ ಈತ ಈಶ್ವರನ ಅಸ್ತಿತ್ವದಲ್ಲಿ ಅಚಲವಾದ ಶ್ರದ್ಧೆಯನ್ನಿಟ್ಟಿದ್ದ. ಸತ್ ಮತ್ತು ಚಿತ್ ಒಂದೇ ತತ್ತ್ವವೆಂದು ಆತ ತಿಳಿದಿದ್ದ. ಜಗತ್ತಿಗೆಲ್ಲಕ್ಕೂ ಆದಿಕಾರಣನಾದ ಪರಮಪುರುಷ ಅವಜ್ಞಾನಸಗೋಚರನೆಂದು ಆತ ಬೋಧಿಸಿದ. ಅವನ ಸ್ವರೂಪವನ್ನು ಹೀಗೇ ಎಂದು ನಿರ್ಣಯಿಸುವುದು ಅಸಾಧ್ಯ. ಆದರೆ ಈ ಜಗತ್ತು ಅವನಿಂದಲೇ ಉತ್ಪನ್ನವಾದುದರಿಂದ ಇದು ಅವನ ಆವಿರ್ಭಾವವೆಂದು ಹೇಳಲು ಅಡ್ಡಿ ಇಲ್ಲ. ಎಲ್ಲವೂ ಪರಮಾತ್ಮನಿಂದಲೇ ಹೊರಹೊಮ್ಮಿ ಬಂದು ಮತ್ತೆ ಅವನ ಕಡೆಗೇ ಧಾವಿಸುತ್ತಿದೇ ಎಂಬುದು ಅವನ ತತ್ತ್ವಸಾರ. ದೇವರ ಸ್ವರೂಪವನ್ನು ಅರಿಯಲು ಅನುಮಾನ ಪ್ರಮಾಣದಿಂದಲ್ಲದಿದ್ದರೂ ಅಪರೋಕ್ಷ e್ಞÁನದಿಂದ ಸಾಧ್ಯವೆಂದು ಎಕ್‍ಹಾರ್ಟನ ವಾದ.

	ಎಕ್‍ಹಾರ್ಟ್ ತನ್ನ ಕಾಲದ ಜರ್ಮನ್ ಭಾಷೆಗೆ ಅನೇಕಾನೇಕ ಹೊಸ ತಾತ್ತ್ವಿಕ ಭಾವನಾಮಗಳನ್ನು ನೀಡಿದ್ದಾನೆ.

(ಎಂ.ವೈ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ